Thursday, April 25, 2013


ನೆನಪ ಪುಟ್ಟ ತುಣುಕುಗಳು ಚೆಲ್ಲಿ ಮೂಡಿವೆ ಹೊಸ ಕವಲುಗಳು
ದಾರಿ ಉದ್ದಕೂ ಅಣಕವಾಡುವ ಕ್ಷಣ ಕ್ಷಣಗಳ ಕುರುಹುಗಳು
ತುಂಬಾ ದೂರ ನಡೆದಾಗಿದೆ ಜೊತೆಯಿಲ್ಲದೆ ಬರಿಗಾಲಲಿ
ಒಂಟಿತನವೇ ಹಾಯೆನಿಸಿದೆ ಇಷ್ಟು ದೂರ ಬಂದ ಮೇಲೆ ||

ಸುದ್ದಿ ಕಂತೆಗಳ ಸಂತೆಯೊಳಗೆ ಸುಸ್ತಾಗಿ
ಅಬ್ಬರದ ಅಲೆಗಳ ಜೊತೆಯಲ್ಲಿ ನಡೆಯುತಲಿ
ಸಾಗರದ ದಂಡೆಯಲಿ ಮರಳ ರಾಶಿ ಮಡಿಲಲ್ಲಿ
ಮೌನಗಾನವೇ ಹಾಯೆನಿಸಿದೆ ಇಷ್ಟು ದೂರ ಬಂದ ಮೇಲೆ ||





Tuesday, May 3, 2011

ಬಾಲ್ಯದ ನೆನಪು

[ From Old Archive ]

ಮರಳಿ ಬರಲಾರೆಯಾ ನೀ ಎನ್ನ ಬಳಿಗೆ
ಮತ್ತೆ ತರಲಾರೆಯಾ ಆ ಸುಂದರ ಘಳಿಗೆ
ಪುಟ್ಟ ಕಂಗಳಲಿ ಹುಟ್ಟಿಸಿದ ಸಿಹಿಗನಸು
ಶಾಲೆಪಾಠಗಳಲಿ ಮುಳುಗಿತ್ತಲ್ಲೋ ಮನಸು ।।ಪ।।

ಊರಕಾಲುವೆಯಲಿ ಮಿಂದು ತೇಲಾಡಿದ ನೆನಪು
ನೀರ ಹನಿಮುತ್ತು ಮೊಗಕೆ ಇಟ್ಟ ಕಚಗುಳಿಯ ಸೊಗಸು
ಗೆಳೆಯರೆಡೆ ಕಣ್ಣುಮುಚ್ಚಾಲೆ ಆಟದಲಿ ಬಿರುಸು
ಅನಿಸುತಿದೆ ಈಗಲೂ ಮತ್ತೆ ಬರಬಾರದೆ ಆ ವಯಸು ।।1।।

ರಾಯರ ತೋಟದಿ ಅಂದು ಕದ್ದು ತಿಂದಂತ ಹುಳಿಮಾವು
ಮಾಲಿ ಓಡಿಸಿ ಬರಲು ಪರದಾಟವದೋ ಬಚ್ಚಿಡಲು
ಸುಸ್ತಾದ ಮೈಮನಕೆ ತಂಪಿತ್ತ ಮರಗುಂಪು ನೆಳಲು
ಅನಿಸುತಿದೆ ಈಗಲೂ ಮತ್ತೆ ತುಂಬಬಾರದೆ ಎನ್ನ ಮನದೊಡಲು ।।2।।

ತಂದೆತಾಯ್ಗಳ ಪ್ರೀತಿ ಛಾಯೆಯಲಿ ಕಳೆದ ಪ್ರತಿನಿಮಿಷ
ಮುಗಿದುಹೋಯ್ತಲ್ಲ ಅಂಥ ಬಾಲ್ಯದ ಹೊಸ ಹರುಷ
ಇನ್ನೆಲ್ಲಿ ಸಿಗುವುದು ಇಂಥ ಅಮೌಲ್ಯ ರತ್ನದಾ ಕಲಶ
ಅನಿಸುತಿದೆ ಈಗಲೂ ಮತ್ತೆ ಬರಬಾರದೆ ಆ ರಸನಿಮಿಷ ।।3।।

Wednesday, March 9, 2011

ನಾನು.. ನೀನು...

ಒಂದೊಂದು ಮಾತು ಹೊಸದಂತೆ ತೋರುವುದು
ನೀ ಸುಳಿದಿರಲು ಎನ್ನ ಹಿಂದೆ ಮುಂದೆ
ಹೂವೊಂದ ಜಡೆಗೆ ನೀ ಮುಡಿದು ನಡೆದಿರಲು
ಕನಸೇ ನನಸಾಗಿರಲು ಮನಕೆ ಕಚಗುಳಿಯನಿಡಲು ||

ಬಟ್ಟಲ ಕಂಗಳ ಮೃದುವಾದ ನೋಟ
ಎನ್ನೊಳಗೆ ಹೇಳಲರಿಯದ ಪರದಾಟ
ನನ್ನ ನಡೆ ನಿನ್ನೆಡೆಗೆ ಮೆಲ್ಲನೆಯೇ ಸೆಳೆದಿಹುದು
ನೇರ ನೋಟದಿ ನೋಡಲೇ ಓರೆ ನೋಟವ ಬೀಸಲೇ ||

Friday, January 28, 2011

ನನ್ನ ಕನಸಿನ ಹುಡುಗ !!

ಹೃದಯದಲಿ ಬಚ್ಚಿಟ್ಟ ಭಾವನೆಗಳ ಪ್ರತೀಕ ನೀ
ಮನದಾಳದಲಿ ಪುಟಿದೇಳುತಿಹ ಆಶಾಭಾವ ನೀ
ಕಾಡದಿರು ಹೀಗೆನ್ನ ತರವೆ ಇದು ನಿನಗೆ
ಓ ನನ್ನ ಕನಸಿನ ಹುಡುಗ...

ಕಾಯುತಿವೆ ಕಣ್ಣುಗಳು ಕುಡಿನೋಟದರಸನಿಗೆ ನನ್ನ ಮನದಿನಿಯಗೆ
ಉರಿಯುತಿದೆ ನನ್ನೊಲವ ಹಣತೆ ಮನದೇಗುಲದಿ ಸಾರುತಿದೆ ಕಣಕಣವೂ
ಈ ರಾಧೆಗೊಬ್ಬನೆ ನೀ ಚೆಲುವ ಶ್ಯಾಮ ನಮ್ಮ ಈ ಅನುಬಂಧ ಏಳೇಳು ಜನುಮಕೂ
ಓ ನನ್ನ ಕನಸಿನ ಹುಡುಗ...

ಏಕಾಂತ ನಾನಿಲ್ಲಿ ಕಾಡುತಿದೆ ಕ್ಷಣಕ್ಷಣವೂ ಯುಗವಾಗಿ ನನಗಿಲ್ಲಿ
ಬಂದೆನ್ನ ಪರಿಹರಿಸು ಈ ಮನದ ಬೇಗೆ ಕಾಯುವೆನು ನಿನಗಾಗಿ ಕೊನೆತನಕ ಹೀಗೆ
ತಿಳಿದಿಹೆನು ನಿನಗಿಹುದು ಹುಸಿಗೋಪ ನನ ಮೇಲೆ ಬರೆದಿರುವೆ ಅದಕಾಗೆ ಈ ಒಲವ ಓಲೆ
ಓ ನನ್ನ ಕನಸಿನ ಹುಡುಗ...

ಮುಂಗಾರು

ಹನಿಹನಿಯಲಿ ತೇಲಿಬರುತಿದೆ ತುಂತುರುನಾದ
ನಡುವೆ ಗುಡುಗು ಸಿಡಿಲಿನ ಡಂಗುರದ ಬಡಿತ
ಮೋಡದಂಚಲಿ ಅಣಕಿಸಿ ಮರೆಯಾಗುವ ಭಾಸ್ಕರ
ಪ್ರಕೃತಿಯಾಟದ ಸೊಬಗಿದೆನಿತು ವಿಸ್ಮಯಕರ ।।

ಬೆಂಗದಿರ ಭುವಿಗೆ ತಂಪಿನಾ ಸಿಂಚನ
ಹುಲ್ಲು ಹಸಿ ಮಣ್ಣಿಗೆ ಕಂಪಿನಾ ಲೇಪನ
ತೋರುವುದು ಜಗವೆಲ್ಲಾ ಮದುವಣಗಿತ್ತಿಯಂತೆ
ಹೆದೆಯೇರಿಸಿದ ರವಿಯ ಕಾಮನಬಿಲ್ಲಿನಂತೆ ।।

ಹೊನಲ ನೀರದು ನೋಡು ಹರಿಯುತಿದೆ ರಭಸದಲಿ
ಬಲು ಬೇಗ ಸಾಗರವ ಕೂಡುವ ತವಕದಲಿ
ಅಲೆಗಳಿಗೆ ಸಂಭ್ರಮವು ಹಬ್ಬದ ಸಡಗರವು
ಏರಿಳಿತದಬ್ಬರದಿ ದಡ ಸೇರಲಾತುರವು ।।

Snow... Snow... Snow...

ಹೇಳಿಕೆ ಇಲ್ಲದೆ ಚಳಿಯಲ್ಲಿ ಬರುವ ಈ ಅತಿಥಿ
ಬೇಡುವಂತೆ ಕೇಳಿದ್ರೂ ಮತ್ತೆ ಮರಳಿ ಬರುವನಿವ
ನೋಡಲು ಬಲು ಅಂದ ಹಾಲಿನಷ್ಟು ಮೃದು ಹೃದಯ
ಬಿಳಿ ಕೆನೆಯ ಎಲ್ಲೆಲ್ಲೂ ಚೆಲ್ಲಿ ಆಟವಾಡುವ ಪೋರ
ಅರೆರೆ ಮರುಳಾಗದಿರಿ ಇವನ ಮುದ್ದು ಮೋಡಿಗೆ
ಹಿಡಿತ ತಪ್ಪಿ ನಡೆದರಂತೂ ಜಾರಿ ಬೀಳೋದು ತಪ್ಪದು

Wednesday, November 3, 2010

ಮುಂಜಾವು

ನೆತ್ತರ ಬಣ್ಣದ ಅತ್ತರು ಚೆಲ್ಲಿದೆಯೋ
ನೇಸರನ ಆಗಮನಕೆ ಸಂಭ್ರಮ ಸಡಗರವೋ
ರಂಗು ರಂಗಿನ ರಂಗೋಲೆ ಮೋಡಗಳ ಸರಮಾಲೆ
ಚುಕ್ಕಿ ಚಂದ್ರಮನ ಪರದೆ ಸರಿಸುತಲಿ
ಬಂದನದೋ ಭಾಸ್ಕರ ಅಬ್ಬರದ ದಿಬ್ಬಣದಿ ||

Saturday, August 14, 2010

ಒಂಟಿತನ

ಎಲ್ಲೆಲ್ಲೂ ಇಹರು ಜನರು ಯಾರಿಲ್ಲ ನನ್ನವರು
ನೂರೆಂಟು ಕನಸುಗಳು ದಡ ಸೇರದಿಹ ಅಲೆಗಳು
ಮನದಳಲು ಅರಿತವರಾರು ಯಾರಲ್ಲಿ ಹೇಳಲಿ
ಬೇಗೆ ಕುದಿಯುತಿದೆ ಎನ್ನ ಒಡಲಾಳದಲಿ

ಜೀವನದ ಸಾಗರದಿ ನೂರಾರು ಏರಿಳಿತಗಳು
ಬಂದು ಅಪ್ಪಳಿಸಿ ತಳಮಳಿಸಿದೆ ಎನ್ನ ಮನವು
ಕೊನೆ ಎಲ್ಲೋ ಈ ಪಯಣಕೆ ದಣಿದಿದೆ ತನುಮನವು
ದಡ ಸೇರಿಸೋ ಅಂಬಿಗಗೆ ಕಾಯುತಿಹೆ ಪ್ರತಿ ದಿನವೂ...

Friday, August 6, 2010

ಕೋಟಿ ಪದಗಳಲಿ ಒಂದ ಹೆಕ್ಕಿದರೆ ಇನ್ನೊಂದು ಮುನಿಯದೆ ?
ಒಲವಿಂದ ಕರೆದರೆ ಮಾತ್ರ ಒಲಿದು ಬರಬಹುದು ಬಳಿಗೆ
ಕನಸುಗಳ ಸಂತೆಯಲಿ ಕಳೆದು ಹೋಗಿದೆ ಮನಸು
ಭಾವನೆಗಳ ಹೊದಿಕೆಯೊಳಗಿದೆ ಆಸೆಗಳ ಮೂಟೆ
ನುಡಿ ಮುತ್ತ ಚೆಲ್ಲಿದರೆ ಸಾಕು ನಿನ್ನದಾಗುವುದೆಲ್ಲ !

Wednesday, February 10, 2010



ಜೀವನವೊಂದು ಬಯಲು ದಾರಿ
ಸಾಗುತಿದೆ ಎತ್ತ ಪಯಣ?
ಮುಳುಗುತಿಹನು ರವಿ ಪಡುವಣದಿ
ನಾಳೆ ಮತ್ತೆ ಬರುವ ಭರವಸೆಯ ತೋರಿ ||

Thursday, January 14, 2010

ಮನಸೊಳಗೊಂದು ಕವಿತೆ ಇಣುಕಿ ನೋಡುತಿದೆ
ತನ್ನ ಪದಗಳ ಜೋಡಣೆಗೆ ಹುಡುಕಾಟ ನಡೆಸಿದೆ
ಅರ್ಥ ಭಾವಾರ್ಥಗಳ ಕೂಡಿಸಿ ಆಸೆ ಚಿಗುರುಗಳ ಸೇರಿಸಿ ||

ಪ್ರೀತಿ ಹನಿಗಳ ಇಂಚರ ಎದೆಗೂಡಿನ ಒಳಗೆ
ಅಲ್ಪ ಸ್ವಲ್ಪ ನೆನಪುಗಳ ಚಾದರವನು ಹೊದೆಸಿ
ನದಿಯಾಗಿ ಹೊನಲಾಗಿ ಹರಿಯುತಿದೆ ಮುಂದೆ
ಮಾತುಗಳ ಸಾಗರಕೆ ಸೇರುವ ಹೆಬ್ಬಯಕೆಯೇ ? ||

ಮುತ್ತು ಮಾತ ಮಣಿಗಳು ತಂಪನ್ನು ಸೂಸುತಿವೆ
ಮಗದೊಂದು ಮನದೊಳಗೆ ಹೊಸ ಬೆಳಕ ಬೀರುತಿವೆ
ಒಂದರಿಂದ ಹತ್ತು ನೂರು ಸಾವಿರಾರು ಹೀಗೆ
ಕಾಣಲಿ ಮನಗಳು ಪ್ರೀತಿ ಸ್ನೇಹದ ಸೇತುವೆ ||

Friday, June 13, 2008

ಪರರ ನೋವಿನಲಿ ಖುಷಿ ಪಡುವ ಮೂರ್ಖರೆಷ್ಟೋ
ತಾವೇ ಬಳಲಿದರೆ ಅರಿಯುವುದು ಉರಿಯೆಷ್ಟು!

ತಾನು ತನ್ನವರೆಂದು ಕೋಟೆ ಹಾಕುವುದೇಕೆ
ಶುದ್ಧ ಮನ ಸಮರಸವೇ ಸುಖ ಸೌಖ್ಯದ ಸ್ವಾರಸ್ಯ

ಇರುವುದೊಂದು ಜನ್ಮ ನಾಲ್ಕು ದಿನದ ಪಯಣ
ಕೂಡಿ ಬಾಳುವ ಮರ್ಮ ಕಲಿಯ ಬಾರದೇಕೆ?


-

Thursday, June 12, 2008

ಪುಟ್ಟು ಕಂದಮ್ಮ

ನೀ ಅತ್ತರೆ ನಾ ಅಳುವೆ
ನೀ ನಕ್ಕರೆ ನಾ ನಗುವೆ
ನಿನ್ನೊಡನೆ ನಾನಿರಲು
ಜಗವನ್ನೇ ನಾ ಮರೆವೆ ||

ಅಕ್ಕರೆಯ ಮುದ್ದು ನಗು
ಸವಿ ಜೇನ ಹನಿಯಂತೆ
ಪುಟ್ಟ ಕಾಲ್ಗಳ ಗೆಜ್ಜೆ ದನಿ
ಇಂಪು ನಾದದ ಲಹರಿ ||

ನಾ ಬರುವುದ ನೀ ಕಾಯುವೆ
ನಿನ್ನ ಅಪ್ಪುಗೆ ಕೆಂದಾವರೆ
ನಿನ್ನ ಪ್ರೀತಿಯ ಕಣ ಕಣವೂ
ನನ್ನ ಬಾಳಿಗೆ ಮಹದಾಸರೆ ||

Friday, May 30, 2008

ಆಶಾವಾದಿಯ ಗುನುಗು !

ಒಳಗೊಂದು ಹೊರಗೊಂದು ನನಗಿರಲು ಬಾರದು
ತಳಮಳದ ಇರಿತವನು ಸಹಿಸಲೂ ಆಗದು
ಮನಸು ಹುಚ್ಚು ಕುದುರೆ ಕನಸ ಕಾಣದು ಬಿಡದು
ನನಗಾರು ಹಿತವರು ಪುಟ್ಟು ಮನಸನ್ನ ಅರಿವವರು?

ಪ್ರೀತಿ ತೋರುವ ಮನಸು ಪ್ರೀತಿ ಬಯಸುದು ತಪ್ಪೇ?
ಮತ್ತೆ ಬಾರದು ಜಗದಿ ಕಳೆದು ಹೋಗಿಹ ಸಮಯ
ಕ್ಷಣದ ಖುಷಿ ಸಾಕೆನಗೆ ಮುಗುಳು ನಗೆ ತುಟಿ ಮೇಲೆ
ಮತ್ತೆ ಬರಲಿದೆ ವಸಂತ ಇಂದಲ್ಲ ನಾಳೆ ...

Monday, June 19, 2006

(Poem) ಎನ್ನ ಮನದನ್ನೆ - ೨

ಎನ ನಲ್ಲೆಯ ಬಗ್ಗೆ ಏನೆಂದು ವಿವರಿಸಲಿ
ಸರಳ ಸುಂದರತೆಯ ಸಾಕಾರ ಇವಳು ||

ಒಲ್ಲದಿಹ ಮಾತಿಗೆ ಸನ್ನೆಯಲೇ ನಕಾರ
ಪ್ರೀತಿ ಬಯಸುತಿಹ ಜೀವಕೆ ಒಲವಿನಲಿ ಸಹಕಾರ
ತುಂಟ ಕುಡಿ ನೋಟದಲೇ ಸೆರೆ ಹಿಡಿವ ರತಿ ಇವಳು
ಬಳುಕು ನಡೆ ನೀಳ ಜಡೆಯ ಮನ ಕದ್ದ ಒಡತಿ ||

ಜತೆಗೂಡಿ ನನ್ನೊಡನೆ ಎಲೆಯಡಿಕೆ ಮೆಲ್ಲುತಲಿ
ಸುದ್ದಿ ಕಂತೆಯ ಮಹಾಪೂರವನೇ ಕರೆಯುವಳು
ಅವರಿವರ ಸುದ್ದಿ ನಮಗೇತಕೆ ಬಿಡಿ
ಕೊನೆಯಲ್ಲಿ ನನ್ನ ಬಾಯ್ಮುಚ್ಚಿಸುವಳೇ ಇವಳು! ||

- uShai

Thursday, January 12, 2006

(Poem) ಎನ್ನ ಮನದನ್ನೆ - ೧

ಮರೆತು ಬಿಡುವುದು ಹೇಗೆ ಹೇಳು ನಿನ್ನ
ತಂಪೆರಚುವ ಸವಿ ನೆನಪ ಕುರುಹುಗಳ
ಆಗಾಗ ಬಂದು ಕಾಡುತಿಹ ಕನಸುಗಳ ||ಪ||

ಕಾರ್ಮೋಡದ ಸುಳಿ ಮಿಂಚ ಕಂಡೆ ಆ ಕಂಗಳಲಿ
ನೀರ ಬಿಂದಿಗೆ ಪಿಡಿದು ಹೂಬನದ ಕಡೆ ನಡೆದಿಹ ನೀರೆ
ಹಿಂತಿರುಗಿ ನನ್ನೆಡೆಗೆ ನೋಡಿದಾ ಅರೆ ಕ್ಷಣದಿ ||

ಕಾದಿದ್ದೆ ನಾನಂದು ದೇವ ಗುಡಿ ಅಂಗಳದಿ
ಹೂವಬಟ್ಟಲ ಹಿಡಿದು ಬರುವೆಯೆಂದು
ದಿನ ಕಳೆದು ಸಂಜೆಯಾಯ್ತು ನಿನ್ನ ಸುಳಿವಿಲ್ಲ ಇನಿತು ||

ಇಂದಾದರೂ ನೀ ಬರುವೆ ಆಸೆಗೋಪುರವನೇ ಕಟ್ಟಿರುವೆ
ಬಂದೊಮ್ಮೆ ಎನ್ನೆದೆಯ ದೀಪವನು ಬೆಳಗಿಸೆಯಾ
ಕುಡಿನೋಟದಿ ಸನ್ನೆಯಲಿ ಸಮ್ಮತಿಯ ಸೂಚಿಸೆಯಾ ||

- uShai