Wednesday, November 3, 2010

ಮುಂಜಾವು

ನೆತ್ತರ ಬಣ್ಣದ ಅತ್ತರು ಚೆಲ್ಲಿದೆಯೋ
ನೇಸರನ ಆಗಮನಕೆ ಸಂಭ್ರಮ ಸಡಗರವೋ
ರಂಗು ರಂಗಿನ ರಂಗೋಲೆ ಮೋಡಗಳ ಸರಮಾಲೆ
ಚುಕ್ಕಿ ಚಂದ್ರಮನ ಪರದೆ ಸರಿಸುತಲಿ
ಬಂದನದೋ ಭಾಸ್ಕರ ಅಬ್ಬರದ ದಿಬ್ಬಣದಿ ||

Saturday, August 14, 2010

ಒಂಟಿತನ

ಎಲ್ಲೆಲ್ಲೂ ಇಹರು ಜನರು ಯಾರಿಲ್ಲ ನನ್ನವರು
ನೂರೆಂಟು ಕನಸುಗಳು ದಡ ಸೇರದಿಹ ಅಲೆಗಳು
ಮನದಳಲು ಅರಿತವರಾರು ಯಾರಲ್ಲಿ ಹೇಳಲಿ
ಬೇಗೆ ಕುದಿಯುತಿದೆ ಎನ್ನ ಒಡಲಾಳದಲಿ

ಜೀವನದ ಸಾಗರದಿ ನೂರಾರು ಏರಿಳಿತಗಳು
ಬಂದು ಅಪ್ಪಳಿಸಿ ತಳಮಳಿಸಿದೆ ಎನ್ನ ಮನವು
ಕೊನೆ ಎಲ್ಲೋ ಈ ಪಯಣಕೆ ದಣಿದಿದೆ ತನುಮನವು
ದಡ ಸೇರಿಸೋ ಅಂಬಿಗಗೆ ಕಾಯುತಿಹೆ ಪ್ರತಿ ದಿನವೂ...

Friday, August 6, 2010

ಕೋಟಿ ಪದಗಳಲಿ ಒಂದ ಹೆಕ್ಕಿದರೆ ಇನ್ನೊಂದು ಮುನಿಯದೆ ?
ಒಲವಿಂದ ಕರೆದರೆ ಮಾತ್ರ ಒಲಿದು ಬರಬಹುದು ಬಳಿಗೆ
ಕನಸುಗಳ ಸಂತೆಯಲಿ ಕಳೆದು ಹೋಗಿದೆ ಮನಸು
ಭಾವನೆಗಳ ಹೊದಿಕೆಯೊಳಗಿದೆ ಆಸೆಗಳ ಮೂಟೆ
ನುಡಿ ಮುತ್ತ ಚೆಲ್ಲಿದರೆ ಸಾಕು ನಿನ್ನದಾಗುವುದೆಲ್ಲ !

Wednesday, February 10, 2010



ಜೀವನವೊಂದು ಬಯಲು ದಾರಿ
ಸಾಗುತಿದೆ ಎತ್ತ ಪಯಣ?
ಮುಳುಗುತಿಹನು ರವಿ ಪಡುವಣದಿ
ನಾಳೆ ಮತ್ತೆ ಬರುವ ಭರವಸೆಯ ತೋರಿ ||

Thursday, January 14, 2010

ಮನಸೊಳಗೊಂದು ಕವಿತೆ ಇಣುಕಿ ನೋಡುತಿದೆ
ತನ್ನ ಪದಗಳ ಜೋಡಣೆಗೆ ಹುಡುಕಾಟ ನಡೆಸಿದೆ
ಅರ್ಥ ಭಾವಾರ್ಥಗಳ ಕೂಡಿಸಿ ಆಸೆ ಚಿಗುರುಗಳ ಸೇರಿಸಿ ||

ಪ್ರೀತಿ ಹನಿಗಳ ಇಂಚರ ಎದೆಗೂಡಿನ ಒಳಗೆ
ಅಲ್ಪ ಸ್ವಲ್ಪ ನೆನಪುಗಳ ಚಾದರವನು ಹೊದೆಸಿ
ನದಿಯಾಗಿ ಹೊನಲಾಗಿ ಹರಿಯುತಿದೆ ಮುಂದೆ
ಮಾತುಗಳ ಸಾಗರಕೆ ಸೇರುವ ಹೆಬ್ಬಯಕೆಯೇ ? ||

ಮುತ್ತು ಮಾತ ಮಣಿಗಳು ತಂಪನ್ನು ಸೂಸುತಿವೆ
ಮಗದೊಂದು ಮನದೊಳಗೆ ಹೊಸ ಬೆಳಕ ಬೀರುತಿವೆ
ಒಂದರಿಂದ ಹತ್ತು ನೂರು ಸಾವಿರಾರು ಹೀಗೆ
ಕಾಣಲಿ ಮನಗಳು ಪ್ರೀತಿ ಸ್ನೇಹದ ಸೇತುವೆ ||