ಹನಿಹನಿಯಲಿ ತೇಲಿಬರುತಿದೆ ತುಂತುರುನಾದ
ನಡುವೆ ಗುಡುಗು ಸಿಡಿಲಿನ ಡಂಗುರದ ಬಡಿತ
ಮೋಡದಂಚಲಿ ಅಣಕಿಸಿ ಮರೆಯಾಗುವ ಭಾಸ್ಕರ
ಪ್ರಕೃತಿಯಾಟದ ಸೊಬಗಿದೆನಿತು ವಿಸ್ಮಯಕರ ।।
ಬೆಂಗದಿರ ಭುವಿಗೆ ತಂಪಿನಾ ಸಿಂಚನ
ಹುಲ್ಲು ಹಸಿ ಮಣ್ಣಿಗೆ ಕಂಪಿನಾ ಲೇಪನ
ತೋರುವುದು ಜಗವೆಲ್ಲಾ ಮದುವಣಗಿತ್ತಿಯಂತೆ
ಹೆದೆಯೇರಿಸಿದ ರವಿಯ ಕಾಮನಬಿಲ್ಲಿನಂತೆ ।।
ಹೊನಲ ನೀರದು ನೋಡು ಹರಿಯುತಿದೆ ರಭಸದಲಿ
ಬಲು ಬೇಗ ಸಾಗರವ ಕೂಡುವ ತವಕದಲಿ
ಅಲೆಗಳಿಗೆ ಸಂಭ್ರಮವು ಹಬ್ಬದ ಸಡಗರವು
ಏರಿಳಿತದಬ್ಬರದಿ ದಡ ಸೇರಲಾತುರವು ।।
No comments:
Post a Comment