[ From Old Archive ]
ಮರಳಿ ಬರಲಾರೆಯಾ ನೀ ಎನ್ನ ಬಳಿಗೆ
ಮತ್ತೆ ತರಲಾರೆಯಾ ಆ ಸುಂದರ ಘಳಿಗೆ
ಪುಟ್ಟ ಕಂಗಳಲಿ ಹುಟ್ಟಿಸಿದ ಸಿಹಿಗನಸು
ಶಾಲೆಪಾಠಗಳಲಿ ಮುಳುಗಿತ್ತಲ್ಲೋ ಮನಸು ।।ಪ।।
ಊರಕಾಲುವೆಯಲಿ ಮಿಂದು ತೇಲಾಡಿದ ನೆನಪು
ನೀರ ಹನಿಮುತ್ತು ಮೊಗಕೆ ಇಟ್ಟ ಕಚಗುಳಿಯ ಸೊಗಸು
ಗೆಳೆಯರೆಡೆ ಕಣ್ಣುಮುಚ್ಚಾಲೆ ಆಟದಲಿ ಬಿರುಸು
ಅನಿಸುತಿದೆ ಈಗಲೂ ಮತ್ತೆ ಬರಬಾರದೆ ಆ ವಯಸು ।।1।।
ರಾಯರ ತೋಟದಿ ಅಂದು ಕದ್ದು ತಿಂದಂತ ಹುಳಿಮಾವು
ಮಾಲಿ ಓಡಿಸಿ ಬರಲು ಪರದಾಟವದೋ ಬಚ್ಚಿಡಲು
ಸುಸ್ತಾದ ಮೈಮನಕೆ ತಂಪಿತ್ತ ಮರಗುಂಪು ನೆಳಲು
ಅನಿಸುತಿದೆ ಈಗಲೂ ಮತ್ತೆ ತುಂಬಬಾರದೆ ಎನ್ನ ಮನದೊಡಲು ।।2।।
ತಂದೆತಾಯ್ಗಳ ಪ್ರೀತಿ ಛಾಯೆಯಲಿ ಕಳೆದ ಪ್ರತಿನಿಮಿಷ
ಮುಗಿದುಹೋಯ್ತಲ್ಲ ಅಂಥ ಬಾಲ್ಯದ ಹೊಸ ಹರುಷ
ಇನ್ನೆಲ್ಲಿ ಸಿಗುವುದು ಇಂಥ ಅಮೌಲ್ಯ ರತ್ನದಾ ಕಲಶ
ಅನಿಸುತಿದೆ ಈಗಲೂ ಮತ್ತೆ ಬರಬಾರದೆ ಆ ರಸನಿಮಿಷ ।।3।।
No comments:
Post a Comment